Sunday, July 5, 2009


ಮತ್ತೆ ಬ್ಲಾಗಿನ ಬಾಗಿಲನ್ನು ತೆರೆಯುತ್ತಿರುವೆ. ಮೊದಲು ಹಳೆಯ ಸರಕನ್ನು ಏರಿಸಿ, ನಂತರ ಹೊಸ ಸರಕನ್ನು ತುಂಬಿಸುವೆ am opening the blog door again. first, i would upload the old stock, later on the new stock would arrive :)

ಅಕ್ಕ

ಬಾರೋ ತಮ್ಮ ಏರಿ ಏರಿ ಹೋಗುವಾ
ಏರಿ ಇಳಿದು ನೀರ ಕಡೆಗೆ ಸಾಗುವಾ
ನೀರಲಿಳಿದು ದೋಣಿಗಿಳಿದು
ತೇಲಿ ತೇಲಿ ಹೋಗುವಾ

ಮನೆಯಲಾರಿಗೂ ಹೇಳಬೇಡ
ನೀರಗಿಳಿದು ಮುತ್ತು ತರುವ ಬಾರ
ಕಾಣದೂರಿಗೆ ಹೋಗಿ ಬರುವ
ಕ್ಷಣ ಕಾಲ ಜಗವ ಮರೆವ ಬಾರ

ತಮ್ಮ

ಬೇಡಾಕ್ಕ ಬೇಡ
ಯಾರಿಗೂ ಹೇಳದೇ ಹೋಗುವುದು ಬೇಡ
ನೀರಿಗಿಳಿಯುವುದು ಬೇಡ
ಜಗವ ಮರೆಯುವುದು ಬೇಡ

ನಾ ಅಮ್ಮನ ಬಿಡುಲಾರೆ
ಅಪ್ಪನ ಬಿರುಗಣ್ಣಿಗೆ ತುತ್ತಾಗಲಾರೆ
ನಿನ್ನನೂ ನಾ ಬಿಡಲಾರೆ
ಇಬ್ಬರೂ ಹೋಗುವುದು ಬೇಡ

ಅಕ್ಕ

ಬೆಳೆಯೋ ಕಂದಾ!
ಎತ್ತರಕೆ ಬೆಳೆ
ಆಲದ ಮರದಂತೆ ಬೆಳೆ
ಜಗವ ನೋಡು
ಅತ್ತಿತ್ತ ಓಡು
ಅದೋ ಕರೆಯುತ್ತಿದೆ ಕಾಡು
ಒಮ್ಮೆಯಾದರೂ ಅಲ್ಲಿ ಬಿಡೋಣ ಬೀಡು
ಅವುಚಿದ ಮೈ ಕೈ ಝಾಡಿಸು
ಹೆದರಿಕೆಯ ಹೋಗಲಾಡಿಸು
ಅಪ್ಪನಂತೆ ನೀ ಎತ್ತರಕೆ ಬೆಳೆ

ತಮ್ಮ

ಯಾಕೋ ಹೆದರಿಕೆಯಾಗುತಿದೆ
ನಿನ್ನ ಮೇಲಿನ ನಂಬಿಕೆ ಮಾಯವಾಗುತ್ತಿದೆ
ಸಂಜೆಯೂಟವ ಕೊಡುವವರಾರೆ
ಪುಸ್ತಕ ಬಳಪ ಕೊಡಿಸುವವರಾರೆ
ಪಾಠವ ಹೇಳಿಕೊಡುವವರಾರೆ
ನಿದ್ರೆ ಬರಲು ಹೊದಿಸುವವರಾರೆ
ಬೇಡಕ್ಕಾ ಬೇಡ
ನೀನೂ ಹೋಗಬೇಡ
ನನ್ನ ಜೊತೆ ಎಂದಿಗೂ ನೀನಿರು
ನಾವೆಲ್ಲಿಗೂ ಹೋಗುವುದು ಬೇಡ

No comments:

Post a Comment